ಶ್ರೀಕೃಷ್ಣಪಾರಿಜಾತ-
	ಯಕ್ಷಗಾನ ಬಯಲಾಟ ಹಾಗೂ ದೊಡ್ಡಾಟಗಳ ಪರಂಪರೆಯಲ್ಲಿ ಹೆಚ್ಚಿನ ಜನಮನ್ನಣೆಗಳಿಸಿರುವ ಒಂದು ನಾಟಕ.  ಪಾರಿಜಾತ ಹರಣವೆಂಬ ಈ ಕಥಾಭಾಗ ಭಾಗವತ ಮತ್ತು ಹರಿವಂಶ ಪುರಾಣಗಳಲ್ಲಿ ಕಂಡುಬರುತ್ತದೆ.  ಈ ಎರಡೂ ಕಥೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಮೂಲ ಕಥೆ ಒಂದೇ ಆಗಿದೆ.

	ಸ್ವರ್ಗದಿಂದ ನಾರದರು ತಂದ ಪಾರಿಜಾತ ಪುಷ್ಪವನ್ನು ಕೃಷ್ಣನು ರುಕ್ಮಿಣಿಗೆ ಕೊಡಲು, ಅದರಿಂದ ಕೋಪಗೊಂಡ ಸತ್ಯಭಾಮೆ ಸವತಿ ಮತ್ಸರವನ್ನು ವ್ಯಕ್ತಪಡಿಸಿ, ಕೃಷ್ಣನನ್ನು ಪೂರ್ಣವಾಗಿ ತನ್ನತ್ತ ಒಲಿಸಿ ಕೊಳ್ಳಲು ಯತ್ನಿಸುತ್ತಾಳೆ. ಕೃಷ್ಣ ಸತ್ಯಭಾಮೆಯ ಮುನಿಸನ್ನು ಪರಿಹರಿಸಲು ಆಕೆಯ ಮನೆಯಲ್ಲಿಯೇ ಪಾರಿಜಾತವೃಕ್ಷವನ್ನು ಸ್ಥಾಪಿಸುವುದಾಗಿ ಮಾತುಕೊಟ್ಟು, ಆ ವೃಕ್ಷಕ್ಕಾಗಿ ದೇವೇಂದ್ರನಿಗೆ ಹೇಳಿಕಳುಹಿಸಿದಾಗ ಆತ ಅಹಂಕಾರದಿಂದ ನಿರಾಕರಿಸುತ್ತಾನೆ. ಆಗ ಕೃಷ್ಣ ಗರುಡನ ಮೇಲೇರಿ ಸ್ವರ್ಗಕ್ಕೆ ಧಾವಿಸಿ, ದೇವೇಂದ್ರನೊಡನೆ ಯುದ್ಧಮಾಡಿ, ಆತನನ್ನು ಸೋಲಿಸಿ, ವೃಕ್ಷಸಮೇತನಾಗಿ ಹಿಂದಿರುಗಿ ಬಂದು ಅದನ್ನು ಸತ್ಯಭಾಮೆಯ ಮನೆಯಲ್ಲಿ ಪ್ರತಿಷ್ಠಾಪಿಸಿ ಆಕೆಯ ಮುನಿಸನ್ನು ಕಳೆದು ಪ್ರೇಮವನ್ನು ಸೂರೆಗೊಳ್ಳುತ್ತಾನೆ.

	ಈ ಕಥೆಯನ್ನು ಆಧರಿಸಿ ಪ್ರಸನ್ನವೆಂಕಟದಾಸರು (1680-1752) ಸತ್ಯಭಾಮಾವಿಲಾಸ ಅಥವಾ ಶ್ರೀಕೃಷ್ಣಪಾರಿಜಾತ ಎಂಬ ಗೀತನಾಟಕವನ್ನೂ ಅಪರಾಳ ತಮ್ಮಣ್ಣ (ಸು. 1800) ಶ್ರೀಕೃಷ್ಣಪಾರಿಜಾತ ಎಂಬ ಗೀತನಾಟಕ ವನ್ನೂ ಕುಲಗೋಡ ತಮ್ಮಣ್ಣ (ಸು. 1860) ಶ್ರೀಕೃಷ್ಣಪಾರಿಜಾತ ಎಂಬ ಬಯಲಾಟವನ್ನೂ ಹರಪನಹಳ್ಳಿ ಭೀಮವ್ವೆ (1822-1905) ಭೀಮೇಶ ಕೃಷ್ಣ ಎಂಬ ಅಂಕಿತದಲ್ಲಿ ಪಾರಿಜಾತ ಎಂಬ ಸಂಗೀತನಾಟಕವನ್ನೂ ಭೀಮರಾವ ಗುಮಾಸ್ತೆ ಎಂಬುವರು (1835-1915) ಐಹೊಳೆ ವೆಂಕಟೇಶ ಎಂಬ ಅಂಕಿತದಲ್ಲಿ ಶ್ರೀಕೃಷ್ಣಪಾರಿಜಾತ ಲಘುಗೀತ ನಾಟಕವನ್ನೂ ಬೆಳ್ಳಾವೆ ನರಹರಿಶಾಸ್ತ್ರೀ ಅವರು ಶ್ರೀಕೃಷ್ಣಪಾರಿಜಾತ (1928) ಎಂಬ ಸಂಗೀತನಾಟಕವನ್ನೂ ರಚಿಸಿದ್ದಾರೆ.  ಇದಲ್ಲದೆ ಶ್ರೀಕೃಷ್ಣಪಾರಿಜಾತದಿಂದ ಸ್ಫೂರ್ತಿಹೊಂದಿ ಪ್ರಸನ್ನವೆಂಕಟದಾಸರು ನಾರದಕೊರವಂಜಿ, ಶ್ರೀರಾಮಪಾರಿಜಾತ ಎಂಬ ಗೀತನಾಟಕಗಳನ್ನೂ ರಚಿಸಿದ್ದಾರೆ. ಗೋಕಾಕದ ಅನಂತಾಚಾರ್ಯರು (18ನೆಯ ಶತಮಾನ) ಶ್ರೀವೆಂಕಟೇಶಪಾರಿಜಾತ, ಶಿವಪಾ ರಿಜಾತ ಎಂಬ ಗೀತನಾಟಕಗಳನ್ನೂ ರಚಿಸಿದ್ದಾರೆ. ಇವುಗಳಂತೆಯೆ ವೀರಭದ್ರಪಾರಿಜಾತ, ಬಿಳಿಗಿರಿರಂಗನ ಪಾರಿಜಾತ ಎಂಬ ನಾಟಕಗಳೂ ಪ್ರಚಾರದಲ್ಲಿವೆ.
	
ಹೀಗೆ ಪಾರಿಜಾತ ನಾಟಕಗಳ ಪರಂಪರೇಯೇ ಬೆಳೆದುಬಂದಿದ್ದರೂ ಅಪರಾಳ ತಮ್ಮಣ್ಣ ಹಾಗೂ ಕುಲಗೋಡ ತಮ್ಮಣ್ಣಕೃತ ಶ್ರೀಕೃಷ್ಣಪಾರಿಜಾತ ಗಳಿಗೆ ದೊರೆತ ಜನಪ್ರಿಯತೆ ಉಳಿದ ಯಾವುದಕ್ಕೂ ದೊರೆತಿಲ್ಲ.  ಅದರಲ್ಲೂ ಕುಲಗೋಡ ತಮ್ಮಣ್ಣನ ಶ್ರೀಕೃಷ್ಣಪಾರಿಜಾತ ಶುದ್ಧಬಯಲಾಟ ಎಂಬ ಹೊಗಳಿಕೆಗೆ ಪಾತ್ರವಾಗಿದೆ. ಈ ಎರಡೂ ನಾಟಕಗಳು ಜನಪದ ರಂಗಭೂಮಿಯ ಮೇಲೆ ಮೆರೆದು ಜನಮನವನ್ನು ಸೂರೆಗೊಂಡಿವೆ.					
		(ಡಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ